ಕುಮಾಂವ್  

ಭಾರತದ ಉತ್ತರ ಪ್ರದೇಶದ ಒಂದು ಆಡಳಿತ ವಿಭಾಗ, ಆ ರಾಜ್ಯದ ವಾಯವ್ಯದಲ್ಲಿದೆ. ಅಲ್ಮೋರ, ಘರ್ವಾಲ್, ನೈನಿಟಾಲ್, ಚಾಮೋಲಿ ಮತ್ತು ಉತ್ತರ ಕಾಶಿ-ಇವು ಇದರಲ್ಲಿರುವ ಜಿಲ್ಲೆಗಳು. ಕಿಹ್ರಾ-ಡೂನ್ ಜಿಲ್ಲೆ, ಹಿಂದೆ ಸಂಸ್ಧಾನವಾಗಿದ್ದು ಉತ್ತರ ಪ್ರದೇಶದಲ್ಲಿ ವಿಲೀನಗೊಂಡ ತೆಹ್ರಿ ಘರ್‍ವಾಲ್-ಇವೂ ಸೇರಿದ ವಿಸ್ತಾರ ಪ್ರದೇಶವನ್ನು ಹಿಂದಿನಿಂದಲೂ ಕುಮಾಂವ್ ಎಂದು ಕರೆಯುವ ರೂಢಿಯಿದೆ. ಯಮುನಾ ನದಿಯ ಉಪನದಿಯಾದ ಟೋನ್ಸ್ ಮತ್ತು ಶಾರದಾದ ಉಪನದಿಯಾದ (ಮಹಾ) ಕಾಳಿ-ಇವುಗಳ ನಡುವೆ ಈ ಪ್ರದೇಶ ಹಬ್ಬಿದೆ. (ಮಹಾ) ಕಾಳಿ ನೇಪಾಳದ ಪಶ್ಚಿಮ ಎಲ್ಲೆ. ಯಮುನಾ, ಗಂಗಾ, ರಾಮಗಂಗಾ ಮತ್ತು ಶಾರದಾ ನದಿಗಳ ಹಿಮಾಲಯನ್ ಜಲಾನಯನ ಪ್ರದೇಶವನ್ನು ಇದು ಒಳಗೊಂಡಿದೆ. ಉಪಸಿವಾಲಿಕ್ ಶ್ರೇಣಿಗಳಿಂದ ಕ್ರಮವಾಗಿ ಎತ್ತರವಾಗುತ್ತ ಸಾಗಿ, ಹಿಮನದಿಗಳ ಮಾಲೆಧರಿಸಿರುವ ಧವಳ ಶಿಖರಗಳಿಂದೊಡಗೂಡಿದ ಈ ಪರ್ವತಪ್ರದೇಶದಲ್ಲಿ ಭಾಗೀರಥಿ ಮತ್ತು ಅಲಕನಂದಾಗಳು ಉಗಮಿಸುತ್ತವೆ. ಕೇದಾರನಾಥ ಬದರೀನಾಥ ಶಿಖರಗಳ ಗೊಂಚಲುಗಳು ಇರುವುದು ಇಲ್ಲಿ. ಪೂರ್ವದಲ್ಲಿರುವ ತ್ರಿಶೂಲ, ನಂದ, ಕೋಟ್ ಮತ್ತು ನಂದಾದೇವಿ ಶಿಖರಗಳಿಗಿಂತ ಎತ್ತರವಾದ ಶಿಖರಗಳು ಭಾರತದಲ್ಲಿ ಕಾಶ್ಮೀರವನ್ನು ಬಿಟ್ಟರೆ ಬೇರೆಲ್ಲೂ ಇಲ್ಲ. ಇಡೀ ಪ್ರದೇಶದಲ್ಲಿ ಅನೇಕ ಕಣಿವೆಗಳಿವೆ.

 ಕುಮಾಂವ್ ಪ್ರದೇಶದ್ದು ಪರ್ವತ ವಾಯುಗುಣ. ತಗ್ಗಿನ ಕಣಿವೆಗಳಲ್ಲಿ ಬೇಸಗೆಯಲ್ಲಿ ಉಷ್ಣತೆ ಹೆಚ್ಚು, ಚಳಿಗಾಲದಲ್ಲಿ ಹೆಚ್ಚು ಚಳಿ. ಮೇ-ಜೂನ್ ಗರಿಷ್ಠ ಉಷ್ಣತೆ 110º ಫ್ಯಾ. 6.000-7,000 ಎತ್ತರದಲ್ಲಿ ಚಳಿಗಾಲದ ಮಧ್ಯಕ ಉಷ್ಣತೆ 40º ಫ್ಯ. ಆದರೆ ಇನ್ನೂ 9,000'-10,000' ಎತ್ತರದಲ್ಲಿ ಉಷ್ಣತೆ ಹಿಮಬಿಂದುವಿಗಿಂತ ಕಡಿಮೆಯಾಗಿರುತ್ತದೆ.

 12,500'ಗಿಂತ ಕೆಳಗಿನ ಪ್ರದೇಶ ಬಹುತೇಕ ಅರಣ್ಯಮಯ. ಎತ್ತರಕ್ಕನುಗುಣವಾಗಿ ಸಸ್ಯದಲ್ಲಿ ಪ್ರಭೇದಗಳಿವೆ.

 ಇಡೀ ಪ್ರದೇಶದಲ್ಲಿ ಪಶುಪಾಲನೆ ಮತ್ತು ವ್ಯಾಪಾರಕ್ಕಿಂತ ಕೃಷಿ ಪ್ರಧಾನವಾದ್ದು. ZsÀೂಪ, ರಾಳ ಇವು ಮುಖ್ಯ ಆರಣ್ಯೋತ್ವನ್ನಗಳು. ರಾಳ ಸಂಗ್ರಹಣೆ ಬಹು ಮುಖ್ಯ ಕಸಬು. ಕಬ್ಬಿಣ, ತಾಮ್ರ, ಸ್ಪಟಿಕ, ಜಿಪ್ಸಂ, ಸೀಸ ಮತ್ತು ಗ್ರಾಫೈಟ್ ಖನಿಜನಿಕ್ಷೇಪಗಳಿವೆ. ಆದರೆ ಅರ್ಥಿಕವಾಗಿ ಇವು ಮುಖ್ಯವಲ್ಲ.

 ಕುಮಾಂವ್ ಅಡಳಿತವಿಭಾಗದ ಕೇಂದ್ರ ನೈೀನಿ ತಾಲ್.

 ಈ ಪ್ರದೇಶಕ್ಕೆ ಕುಮಾಂವ್ ಎಂಬ ಹೆಸರು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವಂತೆ ಕಾಣುತ್ತದೆ. ಸ್ಕಂದಪುರಾಣದಲ್ಲಿ ಬರುವ ಕುಮಾರವನ ಅಥವಾ ಕೂರ್ಮವನವೇ ಕುಮಾಂವ್ ಎಂದು ಪರಿವರ್ತನೆಗೊಂಡಿರಬಹುದೆಂಬುದು ಕೆಲವರ ಮತ. ಸ್ಧಳೀಯ ಭಾಷೆಯೊಂದರ ಹೆಸರಾದ ಕುಮುನೊ ಎನ್ನುವುದರಿಂದ ಈ ಹೆಸರು ಬಂತೆಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ.

 ಕುಮಾಂವ್ ಪ್ರದೇಶದಲ್ಲಿ ಅಲ್ಲಲ್ಲಿ ಕೈಕೊಡಲಿಗಳೂ ಬಾಚಿಗಳೂ ದೊರಕಿದ್ದರೂ ಈ ಪ್ರದೇಶದ ಇತಿಹಾಪೂರ್ವಕಾಲದ ನಿರ್ದಿಷ್ಟ ಸ್ವರೂಪವಿನ್ನೂ ತಿಳಿದಿಲ್ಲ. ಆರ್ಯರು ಕುಮಾಂವಿನ ಮೂಲಕ ಭಾರತಕ್ಕೆ ಬಂದರು ಎನ್ನುವ ಸಿದ್ಧಾಂತಕ್ಕೆ ವಿದ್ವಾಂಸರ ಮನ್ನಣೆ ದೊರಕಿಲ್ಲ. ಪ್ರಾಚೀನ ಕಾಲದಿಂದ ಇಲ್ಲಿ ಕಿರಾತರು ಮತ್ತು ಖಾಸಿಗಳೆಂಬ ಅನಾಗರಿಕ ಜನ ಇದ್ದರೆಂಬುದು ಖಚಿತ. ಬುದ್ಧನ ಮತ್ತು ಅಶೋಕನ ಕಾಲಗಳಿಗೆ ಸಂಬಂಧಿಸಿದಂತೆಯೂ ಕುಮಾಂವಿನ ವಿಚಾರವಾಗಿ ಹೆಚ್ಚು ಮಾಹಿತಿಗಳು ದೊರಕಿಲ್ಲ. ಕ್ರಿ.ಪೂ. 2ನೆಯ ಶತಮಾನದ ಸಮಯದಲ್ಲಿ ಕುಣಿಂದರು ಇಲ್ಲಿ ಅಳುತ್ತಿದ್ದರೆಂದು ಗೊತ್ತಾಗುತ್ತದೆ. ಈ ವಂಶದ ರಾಜ ಅಮೋಘಭೂತಿಯ ಮತ್ತು ಇತರ ಮೂವರು ರಾಜರ ನಾಣ್ಯಗಳು ದೊರಕಿರುವುದರಿಂದ, ಕುಮಾಂವಿನ ಇತಿಹಾಸ ಅವರ ಕಾಲದಿಂದ ಪ್ರಾರಂಭವಾಯಿತೆಂದು ಹೇಳಬಹುದು. ಕುಣಿಂದವಂಶದ ಪತನಾನಂತರ ಕುಮಾಂವಿನ ಕೆಲವು ಭಾಗಗಳು ಯೌಧೇಯ ವಂಶದವರಿಗೆ ಸೇರಿದ್ದುವು. ಅನಂತರ ಸಮುದ್ರಗುಪ್ತನ ಅಲಹಾಬಾದ್ ಶಾಸನದಲ್ಲಿ ಮಾಹಿತಿಗಳು ದೊರಕುತ್ತವೆ. ಈ ಶಾಸನದಲ್ಲಿ ಹೇಳಲಾಗಿರುವ ಕರ್ತೃಪುರವೇ ಕುಮಾಂವ್ ಎಂದು ಅನೇಕ ವಿದ್ವಾಂಸರು ಭಾವಿಸುತ್ತಾರೆ. ಹ್ಯು ಎನ್ ತ್ಸಾಂಗನ ಬರೆವಣಿಗೆಗಳಲ್ಲಿ ಕುಮಾಂವನ್ನು ಕುರಿತ ಉಲ್ಲೇಖಗಳಿವೆ. ಆದರೆ ಆ ಕಾಲದ ಇತಿಹಾಸರಚನೆಗೆ ಇವುಗಳಿಂದ ಹೆಚ್ಚು ಸಹಾಯವಾಗುವುದಿಲ್ಲ. 7ನೆಯ ಶತಮಾನದ ಅನಂತರ ಕತ್ಯೂರಿ ವಂಶದ ಅರಸರು ಕುಮಾಂವಿನಲ್ಲಿ ಅಧಿಕಾರಕ್ಕೆ ಬಂದರು. ಆ ವಂಶದ ಸ್ಧಾಪಕ ಬಸಂತ. ನಿಂಬರ್ತದೇವ, ಇಷ್ಟಗಣ, ಲಲಿತಶೂರದೇವ, ಭೂದೇವ ಮುಂತಾದ ರಾಜರು 11ನೆಯ ಶತಮಾನದ ವರೆಗೆ ಆಳಿದರು. ಅನಂತರ ಚಂದ್ ವಂಶದ ಅರಸರು ಅಧಿಕಾರಕ್ಕೆ ಬಂದರು. ಇವರಲ್ಲಿ ಸೋಮಚಂದ್ (ಅಳ್ವಿಕೆ: 1000-1020) ಮತ್ತು ಆತ್ಮಚಂದ್ ಮುಖ್ಯರು. ಸುಮಾರು 14ನೆಯ ಶತಮಾನದ ಸಮಯಕ್ಕೆ ಗರ್‍ವಾಲ್ ರಾಜರು ಅಧಿಕಾರಾರೂಢರಾದರು. ಇವರಲ್ಲಿ ಅಜಯಪಾಲ ಮತ್ತು ಮಾನ್‍ಷಾ ಮುಖ್ಯರು. ಅನಂತರ ನೇಪಾಳದ ಘೂರ್ಖ ರಾಜರ ವಶಕ್ಕೆ ಅನೇಕ ಭಾಗಗಳು ಸೇರಿದುವು. 19ನೆಯ ಶತಮಾನದ ಪ್ರಾರಂಭದಲ್ಲಿ ಇವರಿಂದ ಬ್ರಿಟಿಷರು ಕುಮಾಂವ್ ರಾಜ್ಯವನ್ನು ವಶಪಡಿಸಿಕೊಂಡರು. ಇದರ ಆಡಳಿತಕ್ಕೆ ಕಮಿಷನರೊಬ್ಬನನ್ನು ಬ್ರಿಟಿಷರು ನಿಯಮಿಸಿದರು. ಕುಮಾಂವ್ ಒಂದು ವಿಭಾಗ ವಾಯಿತು. ಇದರಲ್ಲಿ ಬೆಟ್ಟಗುಡ್ಡಗಳ ನಾಲ್ಕು ಜಿಲ್ಲೆಗಳು ಸೇರಿವೆ. ಕುಮಾಂವ್ ರೆಜಿಮೆಂಟ್ ಎಂದು ಪ್ರಸಿದ್ದವಾಗಿರುವ ಸೈನ್ಯದ ತುಕಡಿ ಇಲ್ಲಿಯ ವೀರರ ದ್ಯೋತಕವಾಗಿದೆ.

 ಸುಮಾರು 7ನೆಯ ಶತಮಾನದ ವರೆಗಿನ ಕುಮಾಂವಿನ ವಾಸ್ತುಶಿಲ್ಪದ ವಿಷಯದಲ್ಲಿ ನಮಗೆ ತಿಳಿದಿರುವುದು ಬಹು ಕಡಿಮೆ. ಈ ಕಾಲದಲ್ಲಿ ದೇವಾಲಯಗಳು ಮರದಿಂದ ನಿರ್ಮಿತವಾಗುತ್ತಿದ್ದುದು ನಿಜವಾದಲ್ಲಿ ಅವು ನಾಶವಾಗಿವೆ. ಜಗತ್‍ಗ್ರಾಮ ಎಂಬಲ್ಲಿ ನಡೆದ ಉತ್ಖನನಗಳಿಂದ ಅಶ್ವಮೇಧಯಾಗದ ನೆಲೆಯೊಂದನ್ನು ಗುರುತಿಸಲಾಗಿದೆ. ಇಲ್ಲಿ ಶೀಲವರ್ಮನೆಂಬ ಮಹಾರಾಜ ಆ ಯಾಗ ಮಾಡಿದನೆಂದು ತಿಳಿಯುತ್ತದೆ. ಇಲ್ಲಿರುವ ತಳಪಾಯಗಳ ಅವಶೇಷಗಳಿಂದ ಇಲ್ಲಿ ದೇವಾಲಯಗಳು ಇದ್ದುವೆಂದು ಮಾತ್ರ ಹೇಳಬಹುದು.

 ಕತ್ಯೂರಿ ವಂಶದ ಅರಸರ ಅಡಳಿತದ ಪ್ರಾರಂಭದೊಡನೆ ವಾಸ್ತುಶಿಲ್ಪದಲ್ಲಿ ಪ್ರಗತಿಯಾಗಿರುವುದನ್ನು ಕಾಣಬಹುದು. ಈ ಕಾಲದ ದೇವಾಲಯಗಳಲ್ಲಿ ಗುಪ್ತ ಶೈಲಿಯ ಪ್ರಭಾವವೂ ಇದೆ. ಇವಕ್ಕೆ ಜಾಗೇಶ್ವರ ದೇವಾಲಯ ಸಮೂಹ ಉತ್ತಮ ನಿದರ್ಶನ. ಜಾಗೇಶ್ವರ ಆಲ್ಮೋರಕ್ಕೆ ಸು. 23 ಮೈಲಿ ದೂರದಲ್ಲಿದೆ. ಇಲ್ಲಿಯ ವಾಸ್ತುಶಿಲ್ಪ ಮುಖ್ಯವಾಗಿ ಮೂರು ಹಂತಗಳದು. ಜಾಗೇಶ್ವರ, ಮೃತ್ಯುಂಜಯ ಮತ್ತು ದಂಡೇಶ್ವರ ದೇವಾಲಯಗಳು ಮೊದಲನೆಯ ಹಂತದವು. ಸು.50' ಎತ್ತರವುಳ್ಳ ಈ ದೇವಾಲಯಗಳಲ್ಲಿ ಚೌಕಾಕಾರದ ಗರ್ಭಗೃಹ, ಸುಖನಾಸಿ ಮತ್ತು ಮಂಟಪಗಳಿವೆ. ಮೂರ್ತಿಶಿಲ್ಪಗಳು ಕಡಿಮೆ. ಈ ದೇವಾಲಯಗಳಲ್ಲಿ ಪ್ರತೀಹಾರ ಶೈಲಿಯ ಪ್ರಭಾವ ಕಾಣಬರುತ್ತದೆ. ಇವುಗಳ ಕಾಲ 7-8ನೆಯ ಶತಮಾನಗಳು. ನವದುರ್ಗಾ, ಲಕುಲೀಶ ಮತ್ತು ನಟರಾಜ ದೇವಾಲಯಗಳು ಎರಡನೆಯ ಹಂತದವು. ಇವು ಐಹೊಳೆ. ಮಹಾಬಲಿಪುರ ಮತ್ತು ಮಧ್ಯಭಾರತ ಶೈಲಿಯ ದೇವಾಲಯಗಳನ್ನು ಹೋಲುತ್ತವೆ. ಬಾಗೇಶ್ವರ, ಗೋಪೇಶ್ವರ ಮತ್ತು ಲಾಖಾಮಂಡಲ ದೇವಾಲಯಗಳು ಮೂರನೆಯ ಹಂತದವು. ಬಾಗೇಶ್ವರ ದೇವಾಲಯ ಕುಮಾಂವಿನಲ್ಲಿಯ ಅತ್ಯಂತ ಪ್ರಸಿದ್ಧ ದೇವಾಲಯ. ಕೆತ್ತನೆಯ ಕೆಲಸ, ಅಲಂಕೃತ ಕಂಬಗಳು. ನಾಗರರೀತಿಯ ಶಿಖರ ಇವುಗಳಿಂದ ಕೂಡಿದ ಈ ದೇವಾಲಯ ಸಣ್ಣದಿದ್ದರೂ ಸುಂದರವಾಗಿದೆ. ಅನಂತರದ ದೇವಾಲಯಗಳು 
ಮಧ್ಯಕಾಲಕ್ಕೆ ಸೇರಿದವು. ದ್ವಾರಾಹಾಟಿನ ಗುಜರ ದೇವಾಲಯ, ಬೈಜನಾಥದ ಲಕ್ಷ್ಮೀನಾರಾಯಣ ದೇವಾಲಯ, ಬಲೀಶ್ವರ ದೇವಾಲಯ-ಇವು ಈ ಕಾಲದವು. ಇವುಗಳಲ್ಲಿ ಶಿಲ್ಪಗಳು ಹೆಚ್ಚು; ಅಲಂಕಾರಗಳೂ ವಿಶೇಷ. ಬಲೀಶ್ವರ, ದೇವಾಲಯದಲ್ಲಿ ಎರಡು ಗರ್ಭಗೃಹಗಳಿವೆ. ಇವು ಗುಜರಾತ್ ಮತ್ತು ರಾಜಸ್ಧಾನದ ದೇವಾಲಯಗಳನ್ನು ಹೋಲುತ್ತವೆ.

 ಕುಮಾಂವಿನ ಶಿಲ್ಪಗಳಲ್ಲಿ ಶೈವ ಶಿಲ್ಪಗಳೇ ಹೆಚ್ಚು. ಈಶ್ವರನ ವಿವಿಧ ರೂಪಗಳು, ತ್ರಿಮೂರ್ತಿ, ಗಣೇಶ, ನಟರಾಜ, ದಕ್ಷಿಣಾಮೂರ್ತಿ, ತ್ರಿಪುರಾಂತಕ, ಅಂಧಕಾಸುರ, ಉಮಾಮಹೇಶ್ವರ, ಕಲ್ಯಾಣಸುಂದರ ಮುಂತಾದ ಶಿಲ್ಪಗಳು ಮಧ್ಯಕಾಲೀನ ದೇವಾಲಯಗಳಲ್ಲಿ ವಿಶೇಷವಾಗಿವೆ. ಮಹಿಷಾಸುರಮರ್ದಿನಿಯ ಕಂಚಿನ ಮೂರ್ತಿಗಳು ಹೇರಳವಾಗಿ ದೊರಕಿವೆ. ಇವು ವಿಶೇಷವಾಗಿ 15ನೆಯ ಶತಮಾನದ ಅನಂತರದ ಕಾಲದವು.

 ಇತ್ತೀಚಿನ ದೇವಾಲಯಗಳಲ್ಲಿ ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳು ಬಹು ಮುಖ್ಯವಾದವು. ಕೇದಾರನಾಥ ದೇವಾಲಯದ ಒಳಭಾಗಗಳು 10-11ನೆಯ ಶತಮಾನಗಳಿಗೆ ಸೇರಿದವೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಆದರೆ ಅವು 17-18ನೆಯ ಶತಮಾನಗಳಲ್ಲಿ ನಿರ್ಮಿತವಾಗಿರಬಹುದು. ಬದರೀನಾಥ ದೇವಾಲಯ ಇನ್ನೂ ಈಚಿನದು. ಇವು ಭಾರತೀಯರಿಗೆ ಪ್ರಮುಖ ಯಾತ್ರಾಸ್ಧಳಗಳಾಗಿ ಸಹಸ್ರಾರು ಜನರನ್ನು ಇಂದಿಗೂ ಅಕರ್ಷಿಸುತ್ತಿವೆ.

 ಕುಮಾಂವಿನಲ್ಲಿ ದೊರಕಿರುವ ಶಾಸನಗಳಲ್ಲಿ 6ನೆಯ ಶತಮಾನದ ತಾಳೇಶ್ವರ ತಾಮ್ರ ಶಾಸನವೇ ಅತ್ಯಂತ ಪ್ರಾಚೀನವಾದ್ದು. ಅಶೋಕನ ಕಾಲ್ಸಿ ಶಾಸನ ಕುಮಾಂವಿನ ಹೊರಗಡಿಯಲ್ಲಿ ದೊರಕಿದ್ದರೂ ಕುಮಾಂವಿನಲ್ಲಿ ಅಷ್ಟು ಪ್ರಾಚೀನವಾದ ಶಾಸನವಿನ್ನೂ ದೊರಕಿಲ್ಲ. ಲಿಪಿಶಾಸ್ತ್ರದ ದೃಷ್ಟಿಯಿಂದ ಕುಮಾಂವಿನಲ್ಲಿ ಉತ್ತರಭಾರತದ ಲಿಪಿಯ ಛಾಯೆಗಳೇ ಇವೆ. ಅನೇಕ ತಾಮ್ರಪತ್ರಗಳ ಶೈಲಿ ಪಾಲರ ತಾಮ್ರಶಾಸನಗಳ ಶೈಲಿಯನ್ನು ಹೋಲುತ್ತವೆ. ಕುಮಾಂವಿನಲ್ಲಿ ಅತ್ಯಂತ ಪ್ರಾಚೀನವೆನ್ನಲಾದ ತಾಳೇಶ್ವರ ತಾಮ್ರಪಟಗಳಲ್ಲಿ ಗುಪ್ತರ ಶೈಲಿಯ ಲಿಪಿ ಎದ್ದು ಕಾಣುತ್ತದೆ. ಪಾಂಡುಕೇಶ್ವರದಲ್ಲಿ ದೊರಕಿರುವ ಕತ್ಯೂರಿ ವಂಶದ ಅರಸರಿಗೆ ಸೇರಿದ ತಾಮ್ರಶಾಸನಗಳು ಚರಿತ್ರೆಯ ದೃಷ್ಟಿಯಿಂದ ಬಹು ಮುಖ್ಯವಾದವು. ಇವು ಉತ್ತರಭಾರತದ 9ನೆಯ ಶತಮಾನದ ಲಿಪಿಯಲ್ಲಿವೆ. ಬಾಗೇಶ್ವರ ಮತ್ತು ಲಾಖಾಮಂಡಲಗಳಲ್ಲಿ ದೊರಕಿರುವ ತಾಮ್ರ ಪಟಗಳು ಉತ್ತಮ ಸಂಸ್ಕ್ರತ ಕಾವ್ಯ ಶೈಲಿಯಲ್ಲಿವೆ. ಬಾರ್ಹಾಟ್ ಮತ್ತು ಗೋಪೇಶ್ವರಗಳಲ್ಲಿ 21' ಮತ್ತು 16' ಎತ್ತರದ ತ್ರಿಶೂಲಗಳ ಮೇಲೆ ಶಾಸನಗಳಿರುವುದು ಗಮನಾರ್ಹವಾದದು. ಕುಮಾಂವಿನ ಶಾಸನಗಳಲ್ಲಿ ನಾಂದಿ ಪದ್ಯ, ಓಂ ಸ್ವಸ್ತಿ. ಶ್ರೀಮತ್ ಮುಂತಾದ ಪದಗಳಿವೆ. ಇಲ್ಲಿಯ ಶಾಸನಗಳಲ್ಲಿ ಸಾಮಾನ್ಯವಾಗಿ ಆಳುವ ರಾಜನ ಕಾಲದ ಉಲ್ಲೇಖ ವಿರುತ್ತದೆ. ಕುಮಾಂವಿನಲ್ಲಿ ಶಾಸನಸಂಗ್ರಹಣ ಕಾರ್ಯ ಇನ್ನೂ ನಡೆಯಬೇಕಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸನಗಳು ದೊರಕುವ ನೀರಿಕ್ಷೆಯಿದೆ.

 ಕುಮಾಂವಿನಲ್ಲಿ ದೊರಕಿರುವ ನಾಣ್ಯಗಳು ಬಹು ಕಡಿಮೆ. ಕುಣಿಂದ ವಂಶದ ಅರಸುಗಳೇ ಕುಮಾಂವಿನಲ್ಲಿ ಮೊಟ್ಟಮೊದಲು ನಾಣ್ಯಗಳನ್ನು ಬಳಕೆಗೆ ತಂದವರು. ಅನಂತರದ ಕುಷಾಣರ ತಾಮ್ರನಾಣ್ಯಗಳು ಕುಮಾಂವಿನಲ್ಲಿ ದೊರಕಿವೆ. ಕುಮಾಂವಿನಲ್ಲಿ ರಾಜ್ಯಭಾರ ಮಾಡಿದ ಯೌಧೇಯರ ನಾಣ್ಯಗಳು ಹೆಚ್ಚು ಸಂಖ್ಯೆಯಲ್ಲಿ ದೊರಕಿವೆ. ಕುಮಾಂವಿನ ಚರಿತ್ರೆಗೆ ಇವು ಬಹು ಮುಖ್ಯವಾದವು. ಕುಣಿಂದ ವಂಶದ ಅರಸರು ಅಚ್ಚುಹಾಕಿದವೆಂದು ಹೇಳಲಾದ ಬೆಳ್ಳಿಯ ನಾಣ್ಯಗಳು ಗುಂಡಗಿದ್ದು 327, 304 ಮತ್ತು 281 ಗ್ರೇನ್ ತೂಕದವಾಗಿವೆ. ಇವುಗಳ ಮುಂಬದಿಯಲ್ಲಿ ಮರದ ಪಕ್ಕದಲ್ಲಿ ನಿಂತಿರುವ ಗೂಳಿಯ ಚಿತ್ರವೂ ಶಿವದತ್ತನ, 
ಹರದತ್ತನ ಎಂಬ ಬರೆಹಗಳೂ ಹಿಂಬದಿಯಲ್ಲಿ ನಂದಿಪಾದವೂ ವೃತ್ತದಲ್ಲಿ ಮರವೂ ಇವೆ. ಯೌಧೇಯರ ನಾಣ್ಯಗಳು ತಾಮ್ರದವು. ಅವು ಗುಂಡಾಗಿವೆ. ಅವುಗಳ ತೂಕ 82ರಿಂದ 195 ಗ್ರೇನ್‍ಗಳು. ಇವುಗಳ ಮುಂಬದಿಯಲ್ಲಿ ಭರ್ಜಿಯನ್ನು ಹಿಡಿದು ನಿಂತಿರುವ, ಆರು ಮುಖಗಳ ಕಾರ್ತಿಕೇಯನ ಚಿತ್ರ, ಕೆಳಗಡೆ ಬ್ರಾಹ್ಮೀಲಿಪಿಯಲ್ಲಿ ಬರೆಹ, ಹಿಂಬದಿಯಲ್ಲಿ ದೇವತೆಯ ಚಿತ್ರ, ಚೈತ್ಯ, ಮತ್ತು ನಿಂತಿರುವ ಗೂಳಿಯ ಚಿತ್ರಗಳಿವೆ. ಮತ್ತೆ ಕೆಲವು ನಾಣ್ಯಗಳು ಕುಮಾಂವಿನಲ್ಲಿ ಇನ್ನೂ ದೊರೆಕಿಲ್ಲ.   

 (ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 